ಉಣ್ಣೆ: ಸಾಮಾನ್ಯವಾಗಿ ಕುರಿಯ ಚರ್ಮದ ಮೇಲೆ ಬೆಳೆದ ತುಪ್ಪಟದಿಂದ ಕತ್ತರಿಸಿ ತೆಗೆಯುವ ನಯವಾದ ಮತ್ತು ಕೂದಲಿನಂತೆ ಇರುವ ವಸ್ತು (ವೂಲ್). ಕುರಿಯ ಹಾಗಿರುವ ಕೆಲವು ಪ್ರಾಣಿಗಳಾದ ಮೇಕೆ, ಲಾಮ ಮುಂತಾದುವುಗಳಿಂದಲೂ ಉಣ್ಣೆಯಂಥ ಕೂದಲನ್ನು ಪಡೆಯಬಹುದು. ಪುರಾಣ ಮತ್ತು ಇತಿಹಾಸಗಳಲ್ಲಿ ಕುರಿ ಉಣ್ಣೆಯನ್ನು ಕುರಿತ ಪ್ರಸ್ತಾಪಗಳಿವೆ. ಮೊದಲು ಒಂದು ಪ್ರಾಣಿಯ ಕೂದಲು ಮಾತ್ರವಾಗಿದ್ದ ಉಣ್ಣೆಯ ವಿಶಿಷ್ಟ ಗುಣ. ಉಪಯುಕ್ತತೆ ಗಳನ್ನು ಮನುಷ್ಯ ಅರಿತು ಅವನ್ನು ಬಳಸಿಕೊಂಡ. ಹೀಗೆ ನಾಗರಿಕತೆ ಮುಂದುವರಿದಂತೆ ಕುರಿಯ ಸಾಕಣೆ ಮತ್ತು ಉಣ್ಣೆಯ ಪೋಷಣೆಗಳ ಕಡೆಗೆ ವಿಶೇಷ ಗಮನವೀಯಲಾಯಿತು. ಇದರಿಂದ ಉಣ್ಣೆಯ ಉದ್ಯಮ ಬೆಳೆಯಿತು. ಈಗ ಪ್ರಪಂಚದಲ್ಲಿ ಸು. 70 ಕೋಟಿಗಿಂತಲೂ ಮಿಗಿಲಾಗಿ, ಅನೇಕ ಬಗೆಯ ಕುರಿಗಳಿವೆಯೆಂದು ಅಂದಾಜು ಮಾಡಲಾಗಿದೆ. 

ಕುರಿಗಳನ್ನು ಸಾಮಾನ್ಯವಾಗಿ ಎರಡು ಬಗೆಯಾಗಿ ವಿಂಗಡಿಸಿದೆ. ಮೊದಲನೆಯದು ಮಾಂಸಕ್ಕಾಗಿಯೇ ಬೆಳೆಸಿದ ಕುರಿಗಳು, ಎರಡನೆಯದು ಉಣ್ಣೆಯ ಉತ್ಪತ್ತಿಗಾಗಿ ಬೆಳೆಸಿದವು.

ಅನೇಕ ದೇಶಗಳಲ್ಲಿ ಉಣ್ಣೆಗಾಗಿ ಕುರಿಗಳನ್ನು ಬೆಳೆಸುವುದೇ ಒಂದು ಮುಖ್ಯ ಕೈಗಾರಿಕೆ. ಚೀನ, ತುರ್ಕಿ ಮತ್ತು ಸೈಬೀರಿಯ ದೇಶಗಳಿಂದ ದೊರಕುವ ಉಣ್ಣೆ ಸ್ವಲ್ಪ ದಪ್ಪವಾಗಿಯೂ ಉದ್ದವಾಗಿಯೂ ಇರುತ್ತದೆ. ಇದರಿಂದ ವಿಧವಿಧವಾದ ಜಮಖಾನಗಳನ್ನು ತಯಾರಿಸಬಹುದು. ಆಸ್ಟ್ರೇಲಿಯ, ಇಂಗ್ಲೆಂಡ್, ಸ್ಪೇನ್, ಅಮೆರಿಕ ಸಂಯುಕ್ತಸಂಸ್ಥಾನ, ಜರ್ಮನಿ, ಆಫ್ರಿಕ ಮತ್ತು ದಕ್ಷಿಣ ಅಮೆರಿಕ ದೇಶದವರು ಬೆಳೆಸುವ ಒಳ್ಳೆ ಜಾತಿಯ ಕುರಿಗಳಿಂದ ಮೃದುವಾದ ಮತ್ತು ನಯವಾದ ಉಣ್ಣೆ ಸಿಗುತ್ತದೆ. ಈ ತರಹ ಉತ್ತಮವಾದ ಉಣ್ಣೆಯನ್ನು ಮೆರಿನೋ ಜಾತಿಗೆ ಸೇರಿದ ಕುರಿಗಳಿಂದಲೂ ಮತ್ತು ಮೆರಿನೋ ಮಿಶ್ರ ತಳಿಗಳಿಂದಲೂ ಪಡೆಯುತ್ತಾರೆ. ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ನ್ಯೂಜಿಲೆಂಡ್ ದೇಶಗಳು ಮೆರಿನೋ ಜಾತಿಯ ಉಣ್ಣೆಗೆ ಪ್ರಸಿದ್ಧವಾಗಿವೆ. ಜರ್ಮನಿ ಸ್ಯಾಕ್ಸೊನಿ ಜಾತಿಗೂ ಬ್ರಾನ್ಸ್‌ ರ್ಯಾಮ್ ಬುಲೆಟ್ ಜಾತಿಗೂ ಇಂಗ್ಲೆಂಡ್ ಮಾಂಸ ಮತ್ತು ಉದ್ದವಾದ ಉಣ್ಣೆಯನ್ನು ಕೊಡುವ ಜಾತಿಗೂ ಹೆಸರುವಾಸಿಯಾಗಿವೆ.

ಕೈಕತ್ತರಿ ಅಥವಾ ಯಂತ್ರದ ಸಹಾಯದಿಂದ ವರ್ಷಕ್ಕೆ ಒಂದು ಅಥವಾ ಎರಡು ಸಲ ಕುರಿಯ ಉಣ್ಣೆಯನ್ನು ಕತ್ತರಿಸಿ ತೆಗೆಯುತ್ತಾರೆ. ಕೊಂದ ಕುರಿಯಿಂದ ತೆಗೆದ ಉಣ್ಣೆಗೆ ಕಿತ್ತ ಉಣ್ಣೆ ಎಂದು ಹೆಸರು. ಎರಡು ತಿಂಗಳ ಕುರಿಮರಿಯಿಂದ ಪಡೆದ ಉಣ್ಣೆಗೆ ಮರಿಯ ಉಣ್ಣೆಯೆಂದು ಹೆಸರು. ಹಾಗ್ ಎನ್ನುವ ಉಣ್ಣೆ ಸುಮಾರು 11-14 ತಿಂಗಳವರೆಗಿನ ಕುರಮರಿಗಳಿಂದ ದೊರಕುತ್ತದೆ.

ಉಣ್ಣೆಯ ಗುಣವನ್ನು ಮುಖ್ಯವಾಗಿ ಕುರಿಯ ಜಾತಿಯಿಂದ ನಿರ್ಧರಿಸಬಹುದು. ಕೆಲವು ವೇಳೆ, ಒಂದೇ ಜಾತಿಯ ಕುರಿಗಳಲ್ಲೂ ಉಣ್ಣೆಯ ಗುಣದಲ್ಲಿ ವ್ಯತ್ಯಾಸವಿರುತ್ತದೆ. ಮಾರುವ ಮೊದಲು ಉಣ್ಣೆಯ ವ್ಯವಹಾರದಲ್ಲಿ ನುರಿತವರು ಉಣ್ಣೆಯನ್ನು ಅದರ ಉದ್ದ, ಗಾತ್ರ ಮತ್ತು ನಯಕ್ಕನುಗುಣವಾಗಿ ವಿಂಗಡಿಸುತ್ತಾರೆ (ಗ್ರೇಡಿಂಗ್ ಅಂಡ್ ಕ್ಲಾಸಿಂಗ್).

ಉಣ್ಣೆಯ ವಿಚಿತ್ರವಾದ ಮಾಟ ದೇಹದ ಶಾಖವನ್ನು ಸದಾ ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯಕವಾಗಿದೆ. ಅದು ಚಳಿಗಾಲದಲ್ಲಿ ದೇಹಶಾಖವನ್ನು ಕಾದಿಡುತ್ತದೆ ಮತ್ತು ಬಿಸಿಲು ಕಾಲದಲ್ಲಿ ಬೇಗೆಯಿಂದ ದೇಹವನ್ನು ಕಾಪಾಡುತ್ತದೆ. ಕ್ಷಾರಗಳು ಉಣ್ಣೆಯನ್ನು ದುರ್ಬಲ ಗೊಳಿಸುವುವು. ತಣ್ಣೀರು ಅಥವಾ ಬಿಸಿನೀರಿನಲ್ಲಿ ನೆನೆಹಾಕಿ ಉಜ್ಜಿದರೆ ಅದು ಜಡೆಕಟ್ಟಿಕೊಳ್ಳುತ್ತದೆ. ಉಣ್ಣೆ ಬಗೆಬಗೆಯ ಆಕರ್ಷಕ ಬಣ್ಣಗಳನ್ನು ಪಡೆಯಬಲ್ಲದು.
ಉಣ್ಣೆಯ ತಯಾರಿಕೆ: ಹಿಂದಿನ ಕಾಲದಲ್ಲಿ ನಾಗರಿಕತೆ ಸುಪ್ತಾವಸ್ಥೆಯಲ್ಲಿದ್ದಾಗ ನೆಯ್ದ ಉಡುಪುಗಳ ಸೃಷ್ಟಿ ಆಗಿರಲಿಲ್ಲ. ಅಂದು ಕಾಡುಜನ ತಮ್ಮ ದೇಹಗಳನ್ನು ಚಳಿ ಮತ್ತು ಗಾಳಿಯಿಂದ ಸಂರಕ್ಷಿಸಲು ಕಾಡುಕುರಿಗಳ ಮತ್ತು ಮೇಕೆಗಳ ಕೂದಲಿನ ಚರ್ಮವನ್ನು ಉಪಯೋಗಿಸುತ್ತಿದ್ದರು. ಆದರೆ ನಾಗರಿಕತೆ ಬೆಳೆದಂತೆ ಕುರಿ ಸಾಕಣೆಯ ಪ್ರಾಮುಖ್ಯ. ಯುರೋಪು ಖಂಡದಲ್ಲಿ ಅದರಲ್ಲಿಯೂ ಮುಖ್ಯವಾಗಿ ಸ್ಪೇನ್ ಮತ್ತು ಬ್ರಿಟನ್ನುಗಳಲ್ಲಿ ಉನ್ನತಮಟ್ಟಕ್ಕೇರಿತು. ಆಗ ಉಣ್ಣೆ ತಯಾರಿಕೆ ಒಂದು ಮುಖ್ಯ ಪ್ರಮುಖ ಕೈಗಾರಿಕೆಯಾಗಿ ಪರಿಣಮಿಸಿತು.

ಪ್ರಪಂಚದಲ್ಲಿ ಉಣ್ಣೆಯ ಉತ್ಪತ್ತಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ದೇಶಗಳು ಆಸ್ಟ್ರೇಲಿಯ, ನ್ಯೂಜಿûಲೆಂಡ್, ತಾಸ್ಮೇನಿಯ, ಬ್ರಿಟನ್, ದಕ್ಷಿಣ ಆಫ್ರಿಕ ಮತ್ತು ಅರ್ಜೆಂಟೀನ. ಇವುಗಳ ಜೊತೆಗೆ ಚೀನ, ಏಷ್ಯಮೈನರ್, ಭಾರತ ಮತ್ತು ದಕ್ಷಿಣ ಅಮೆರಿಕ ದೇಶಗಳು ಜಮಖಾನ ಮತ್ತು ಕಂಬಳಿಗಳನ್ನು ತಯಾರಿಸುವ ಉಣ್ಣೆಗೆ ಪ್ರಸಿದ್ಧಿಯಾಗಿವೆ.

ಕುರಿಗಳ ಜಾತಿಗೆ ತಕ್ಕಂತೆ ಶೇಖರಿಸಿದ ಉಣ್ಣೆಯನ್ನು ಅದರ ಗುಣಕ್ಕನುಗುಣವಾಗಿ ಉತ್ತಮ ತರಗತಿಯದು, ಮಧ್ಯಮ ತರಗತಿಯದು ಮತ್ತು ಇತರ ವರ್ಗಕ್ಕೆ ಸೇರಿದುದೆಂದು ಅನುಭವಿಗಳು ಬೇರ್ಪಡಿಸುತ್ತಾರೆ. ಉತ್ತಮ ವರ್ಗದ ಉಣ್ಣೆ ಉದ್ದದಲ್ಲಿ ಸ್ವಲ್ಪ ಚಿಕ್ಕದು               1.5”-5”, ಆದರೆ ಅದು ಬಲು ಮೃದು. ಅದರಲ್ಲಿ ಹುರುಪೆಗಳಿರುತ್ತವೆ. ಉದ್ದ ಹೆಚ್ಚಿದಂತೆಲ್ಲ ಅದರ ನಯ ಲಕ್ಷಣ ಮತ್ತು ಹುರುಪೆಗಳು ಕಡಿಮೆಯಾಗುತ್ತವೆ.
ಬೇರ್ಪಡಿಸುವುದು ಮತ್ತು ವಿಂಗಡಿಸುವುದು: ಬೇರೆ ಬೇರೆ ಜಾತಿಯ ಕುರಿಗಳಿಂದ ಶೇಖರಿಸಿದ ಉಣ್ಣೆಯನ್ನು ಬೇರ್ಪಡಿಸುವುದಷ್ಟೇ ಅಲ್ಲದೆ ಒಂದೇ ಜಾತಿಯ ಕುರಿಗಳ ಉಣ್ಣೆಯನ್ನು ಕೂಡ ಅವುಗಳ ದೇಹದ ಭಾಗಕ್ಕೆ ಅನುಗುಣವಾಗಿ ಹದಿನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಬಹಳ ಉತ್ತಮವಾದ ಉಣ್ಣೆ ಕುರಿಯ ಭುಜಗಳಿಂದ ಮತ್ತು ದೇಹದ ಬಲಭಾಗ ಮತ್ತು ಎಡಭಾಗದಿಂದ ಸಿಗುತ್ತದೆ. ಉಳಿದ ಭಾಗದಿಂದ ಕತ್ತರಿಸಿ ಪಡೆದ ಉಣ್ಣೆಯನ್ನು ಅದರ ಯೋಗ್ಯತಾನುಸಾರ ವಿಂಗಡಿಸುತ್ತಾರೆ. ಇದೇ ಉಣ್ಣೆಯ ತಯಾರಿಕೆಯ ಬಲು ಮುಖ್ಯವಾದ ಮೊದಲನೆಯ ಘಟ್ಟ. 

ದೂಳು ತೆಗೆಯುವುದು ಮತ್ತು ಶುದ್ಧಿಮಾಡುವುದು: ಕತ್ತರಿಸಿದ ಉಣ್ಣೆಯಲ್ಲಿ ಅಡಗಿರುವ ಎಣ್ಣೆ, ಒಣಗಿದ ಬೆವರು, ಕೊಳೆ ಮತ್ತು ಕಸಕಡ್ಡಿಗಳು ಮುಂತಾದ ಅನೇಕ ವಿಧವಾದ ಕಶ್ಮಲಗಳನ್ನು ಮೊದಲು ತೆಗೆಯಬೇಕು. ಕೆಲವು ಸಂದರ್ಭಗಳಲ್ಲಿ ಉಣ್ಣೆಯ ತೂಕದ 50% ಇವು ಇರುವುದಿದೆ. ಬಿಡಿಸುವ ಮತ್ತು ದೂಳನ್ನು ತೆಗೆಯುವ ಯಂತ್ರಕ್ಕೆ ಉಣ್ಣೆಯನ್ನು ಮೊದಲು ಹಾಕುತ್ತಾರೆ. ಅಲ್ಲಿ ಅದು ಸ್ವಚ್ಛವಾಗಿಯೂ ಬಿಡಿ ಬಿಡಿಯಾಗಿಯೂ ಹೊರಬರುತ್ತದೆ. ಆಮೇಲೆ ಅದನ್ನು ಸಾಬೂನು ಮತ್ತು ಕ್ಷಾರಗಳ ಸಹಾಯದಿಂದ ಅಥವಾ ಬೇರೆ ವಿಧಾನದಿಂದ ಶುದ್ಧಿಮಾಡುತ್ತಾರೆ. ಉಳಿದಿರುವ ಸಸ್ಯಸಂಬಂಧ ವಸ್ತುಗಳನ್ನು ಇನ್ನೊಂದು ವಿಧವಾದ ಯಂತ್ರದಿಂದ ಬೇರ್ಪಡಿಸಲಾಗುತ್ತದೆ.

ಕಚ್ಚಾ ಉಣ್ಣೆಗೆ ಬಣ್ಣ ಹಾಕುವುದು: ಕೆಲವು ಸಲ ಮೇಲೆ ಹೇಳಿದ ರೀತಿಯಲ್ಲಿ ಶುದ್ಧಿಯಾದ ಉಣ್ಣೆಗೆ ವಿಧ ವಿಧವಾದ ಬಣ್ಣಹಾಕಿ ಸೊಗಸಾದ ಮತ್ತು ಬಣ್ಣಬಣ್ಣದ ಉಣ್ಣೆಯ ಬಟ್ಟೆಯನ್ನು ನೇಯುತ್ತಾರೆ.
ಉಣ್ಣೆಯನ್ನು ಬೆರೆಸುವುದು: ಮುಂದೆ ನೇಯುವ ಬಟ್ಟೆಯ ಯೋಗ್ಯತೆಗೆ ಅನುಗುಣವಾಗಿ ಬೇರೆ ಬೇರೆ ವಿಧವಾದ ಉಣ್ಣೆಯನ್ನು ತಕ್ಕ ಪ್ರಮಾಣದಲ್ಲಿ ಬೆರೆಸಿ ಹದವಾದ ದಾರವನ್ನು ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಉಣ್ಣೆಯ ಜೊತೆಗೆ ಹತ್ತಿಯನ್ನೋ ಕೃತಕ ರೇಷ್ಮೆಯನ್ನೋ ಮಿಶ್ರಮಾಡಿ ಇನ್ನೂ ನಯವಾದ ಬಟ್ಟೆಗಳನ್ನು ಮಾಡುತ್ತಾರೆ. ಉಣ್ಣೆಯ ಎಳೆಗಳು ಯಂತ್ರದಲ್ಲಿ ಸುಲಭವಾಗಿ ಸಾಗಲು ಸ್ವಲ್ಪ ಪ್ರಮಾಣದಲ್ಲಿ ಉಣ್ಣೆಯನ್ನು ತುಂತುರು ಹನಿಯ ರೂಪದಲ್ಲಿ ಬೆರೆಸುತ್ತಾರೆ. ಈ ರೀತಿ ತಯಾರಾದ ಉಣ್ಣೆಯನ್ನು ಎಳೆಗೈವ (ಕಾರ್ಡಿಂಗ್) ಯಂತ್ರಗಳಲ್ಲಿ ಎಳೆ ಎಳೆಯಾಗಿ ಬೇರ್ಪಡಿಸಿ ಕಡೆಗೆ ಮೃದುವಾದ ಹಗ್ಗದೋಪಾದಿಯಲ್ಲಿ ಹೊರತೆಗೆಯುತ್ತಾರೆ. ಇದನ್ನು ಉಣ್ಣೆದಾರ ತಯಾರುಮಾಡುವ ಮ್ಯೂಲ್ ಎಂಬ ಯಂತ್ರದಿಂದ ದಾರವಾಗಿ ಪರಿವರ್ತಿಸಲಾಗುವುದು. 
ಉಣ್ಣೆಯಿಂದ ತಯಾರಾದ ದಾರವನ್ನು ಎರಡು ವಿಭಾಗವಾಗಿ ಅದರ ಗುಣಕ್ಕೆ ತಕ್ಕಂತೆ ವಿಂಗಡಿಸ ಬಹುದು. ಒಂದು ಸಾಧಾರಣ ಮಟ್ಟದ ಮತ್ತು ಮೇಲೆ ಹೇಳಿದ ವಿಧಾನದಲ್ಲಿ ತಯಾರಾದ ಉಣ್ಣೆಯ ದಾರ. ಇದರಿಂದ 

ಮಧ್ಯಮವರ್ಗದ ಬಟ್ಟೆಗಳನ್ನು ತಯಾರಿಸಬಹುದು. ಮತ್ತೊಂದು ಉತ್ತಮಮಟ್ಟದ ವಸಿರ್ಬ್‌ಡ್ ದಾರ. ಇದರಿಂದ ಅತಿ ನಯವಾದ ಮತ್ತು ನಾಜೂಕಾದ ಬೆಲೆ ಬಾಳುವ ಬಟ್ಟೆಗಳನ್ನು ತಯಾರಿಸಬಹುದು. ವಸರ್ಟ್‌ಡ್ ದಾರ ತಯಾರಿಸುವ ಮೊದಲು ಉತ್ತಮ ದರ್ಜೆಯ ಉಣ್ಣೆಯಲ್ಲಿರತಕ್ಕ ಚಿಕ್ಕ ಎಳೆಗಳನ್ನು ಬಾಚುವ ಯಂತ್ರದಿಂದ ಬೇರ್ಪಡಿಸಲಾಗುವುದು. ಉಳಿದ ಉದ್ದವಾದ ಎಳೆಗಳನ್ನು ಹೆಚ್ಚಿನ ಯಂತ್ರಗಳ ಮೂಲಕ ಎಲ್ಲ ಎಳೆಗಳು ನೇರವಾಗಿರುವಂತೆ ಮಾಡಿ ಅದರಿಂದ ಹೊಳಪಾದ ಮತ್ತು ಬಲವಾದ ವಸಿರ್ಬ್‌ಡ್ ದಾರವನ್ನು ಪಡೆಯಬಹುದು.

ಬಟ್ಟೆ ತಯಾರಿಕೆ
ಸಾಮಾನ್ಯವಾಗಿ ಉಣ್ಣೆಯ ನೂಲಿನಿಂದ ತಯಾರುಮಾಡುವ ಬಟ್ಟೆಯನ್ನು ಎರಡು ರೀತಿಯಿಂದ ಪಡೆಯಬಹುದು. 1. ದಾರಗಳನ್ನು ಹೆಣೆದು ಬಟ್ಟೆಯನ್ನು ತಯಾರಿಸುವುದು. ಇವು ಹೆಚ್ಚು ಪದರ ಪದರವಾಗಿರುತ್ತವೆ. 2 ಮಗ್ಗಗಳಿಗೆ ದಾರವನ್ನು ಹಾಸು ಹೊಕ್ಕಾಗಿ ಹೊಂದಿಸಿ ವಿಧ ವಿಧವಾದ ನೇಯ್ಗೆಗಳನ್ನು ಅಳವಡಿಸಿ ಬಟ್ಟೆಗಳನ್ನು ಪಡೆಯುವುದು. ಕೆಲವು ವೇಳೆ ಎಳೆಗಳನ್ನು ತೆಗೆಯದೆಯೇ ಒತ್ತಡವನ್ನು ಪ್ರಯೋಗಿಸಿ ಫೆಲ್ಟ್‌ ಎಂಬ ಬಟ್ಟೆಯನ್ನು ಕೂಡ ಮಾಡುವರು.

ಫ್ಲಾನೆಲ್, ಟ್ವೀಡ್, ಜೆರ್ಸಿ, ಸರ್ಜ್‌, ಗ್ಯಾಬರ್ಡೀನ್ ಇತ್ಯಾದಿಗಳು ಉಣ್ಣೆ ಬಟ್ಟೆಗಳ ಕೆಲವು ವಿಧಗಳು. ಸಾಮಾನ್ಯ ವಾಗಿ ಉಣ್ಣೆಯ ಬಟ್ಟೆಗಳು ಗಟ್ಟಿ ಮತ್ತು ಬಾಳಿಕೆಯುಳ್ಳವಾಗಿ ಇರುತ್ತದೆ. ಉಣ್ಣೆಯ ಸ್ಥಿತಿಸ್ಥಾಪಕ ಶಕ್ತಿಯ ಗುಣ ದಿಂದ ಅದರ ಬಟ್ಟೆಗಳು ಹೆಚ್ಚು ಮುದುಡಿಕೊಳ್ಳುವುದಿಲ್ಲ. ಉಣ್ಣೆ ಬಟ್ಟೆಗಳಿಂದ ಶಾಖ ಪ್ರವಹಿಸದ ಕಾರಣ ಚಳಿಗಾಲದಲ್ಲಿ ಮೈಯನ್ನು ಬೆಚ್ಚಗಿಡಲು ಅವು ಬಹಳ ಉಪಯುಕ್ತವಾಗಿವೆ. ಉಣ್ಣೆಗೆ ಕುಗ್ಗುವ ಗುಣವಿರುವುದರಿಂದ ಉಣ್ಣೆ ಬಟ್ಟೆಗಳನ್ನು ಒಗೆಯುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ತಣ್ಣೀರನ್ನೇ ಉಪಯೋಗಿಸಬೇಕು; ಮತ್ತು ಒದ್ದೆಯಾಗಿದ್ದಾಗಲೇ ಉಡುಪನ್ನು ಅದರ ಮೊದಲ ಬಟ್ಟೆಯ ಆಕಾರಕ್ಕೆ ತರುವುದು ಒಳ್ಳೆಯದು. ಹೆಚ್ಚು ಕಾಯ್ದ ಇಸ್ತ್ರಿಪೆಟ್ಟಿಗೆಗಳಿಂದ ಇಸ್ತ್ರಿ ಮಾಡಿದರೆ ಸತ್ತ್ವ ಕಳೆದುಹೋಗುತ್ತದೆ.			(ಬಿ.ಬಿ.ಆರ್.)

ಸ್ವರೂಪ
ಉಣ್ಣೆಎಳೆ ಒಂದು ಸಂಕೀರ್ಣ ಮತ್ತು ವ್ಯವಸ್ಥಿತ ರಚನೆ. ಇದರ ಮೂಲ ಚರ್ಮದ ಹೊರ ಪದರದಲ್ಲಿದೆ (ಎಪಿಡರ್ಮಿಸ್). ಬೆಳೆವಣಿಗೆಯನ್ನು ಪ್ರೇರಿಸುವ ಗ್ರಂಥಿಗಳು ಚರ್ಮದ ಕೆಳ ಪದರದಲ್ಲಿ (ಡರ್ಮಿಸ್) ಹುದುಗಿವೆ. ಇವು ಎರಡು: ಸಿಬಾಶಿಯಸ್ ಮತ್ತು ಸ್ಯೂಡಿಫೆರಸ್. 

ಮೊದಲಿನದು ಉಣ್ಣೆಕೊಬ್ಬನ್ನು (ವುಲ್ಗ್ರೀಸ್) ಸ್ರವಿಸುತ್ತದೆ. ಇದನ್ನು ಶುದ್ಧೀಕರಿಸಿದಾಗ ಲ್ಯಾನೊಲಿನ್ ದೊರೆಯುವುದು. ಎರಡನೆಯದು ಸ್ವೇದವನ್ನು(ಸ್ಯೂಂಟ್) ಸ್ರವಿಸುತ್ತದೆ. ಕಚ್ಚಾ ಉಣ್ಣೆಯಲ್ಲಿರುವ ಕೊಬ್ಬು ಮತ್ತು ಸ್ವೇದಸ್ರಾವಗಳ ಒಟ್ಟು ಹೆಸರು ಯೋಕ್. ಇದನ್ನು ಮನುಷ್ಯಚರ್ಮ ಹೀರಿಕೊಳ್ಳುವುದರಿಂದ ಅಂಗರಾಗಗಳ (ಕಾಸ್ಮೆಟಿಕ್) ತಯಾರಿಕೆಯಲ್ಲಿ ಇದರ ಉಪಯೋಗ ಹೆಚ್ಚು. ಬೆಳೆಯುವ ಉಣ್ಣೆಯ ಎಳೆಗಳಿಗೆ ಗ್ರಂಥಿ ಸ್ರಾವಗಳು ಮೃದುಚಾಲಕಗಳಾಗಿಯೂ (ಲ್ಯೂಬ್ರಿಕೆಂಟ್ಸ್‌) ರಕ್ಷಕಗಳಾಗಿಯೂ ವರ್ತಿಸುವುವು.

ಉಣ್ಣೆ ಮೂಲತಃ ಕೆರಾಟಿನ್ ಎಂಬ ಒಂದು ಪ್ರೋಟೀನ್. ಹ್ಯಾಲೋಜನ್ನುಗಳೊಂದಿಗೆ ರಾಸಾಯನಿಕ ವ್ಯತ್ಯಾಸ ಹೊಂದುತ್ತವೆ. ಸು. 40ಲಿ ಸೆಂ. ಗ್ರೇ. ಉಷ್ಣತೆಗೆ ಕಾಯಿಸಿದಾಗ ಗಡಸಾಗಿ ಸಾಮರ್ಥ್ಯವನ್ನೂ ತೇವವನ್ನು ಕಳೆದುಕೊಂಡು, ತಣ್ಣಗಾಗಿಸಿದಾಗ ಮೊದಲಿನ ಗುಣಗಳನ್ನು ಪುನಃ ಪಡೆಯುತ್ತದೆ. ಅತಿಶೀತ ಪರಿಸ್ಥಿತಿಯಲ್ಲೂ ಗಮನಾರ್ಹ ಬದಲಾವಣೆ ಏನೂ ಕಂಡಿಲ್ಲ. ನೀರಿನಲ್ಲಿ ಕರಗದು, ಆದರೆ ಸಾಕಷ್ಟು ನೀರನ್ನು ಹೀರಿಕೊಳ್ಳಬಲ್ಲದು. 

ಉಣ್ಣೆ ಜುಂಗು
ಉಣ್ಣೆನೂಲುವ ಕ್ರಮದಂತೆ ನೂತ ಉಣ್ಣೆಯಿಂದ ರಚಿತವಾದ, ಪುನರುತ್ಪಾದಿತ ಹಿಂಜುದಾರ (ಷಾಡಿ). ಒಂದು ಸಲ ತಯಾರಾದ ಬಟ್ಟೆ ಹರಿದು ತುಣುಕು ಗಳಾದಾಗ ಅವನ್ನು ಪುನಃ ನೂತು ನೇಯ್ದು ಮಾಡಿದ ವಿಶಿಷ್ಟ ಮಾದರಿಯ ಬಟ್ಟೆ ಇದು. ಹೆಣಿಗೆ ಬಟ್ಟೆಗಳು (ನಿಟೆಡ್ ಫ್ಯಾಬ್ರಿಕ್ಸ್‌), ಬಿರುನೂತ ಬೀಳು (ಹಾರ್ಡ್ ಸ್ಪಿನಿಂಗ್ಸ್‌ ವೇಸ್ಟ್‌ ಸ್). ಶಾಲುಗಳೇ ಮುಂತಾದುವುಗಳಿಂದ ಇದನ್ನು ತಯಾರಿಸುವರು. ಇವುಗಳ ಜೊತೆಗೆ ಹೊಸ ಉಣ್ಣೆಯನ್ನು ಸೇರಿಸಿ ಸರಾಸರಿ ಮಟ್ಟದ ನೂಲನ್ನು ಸಿದ್ಧಪಡಿಸುತ್ತಾರೆ. ಷಾಡಿಯ ಗುಣಲಕ್ಷಣ ಗಳು ಅದನ್ನು ತಯಾರಿಸುವಾಗ ಉಪಯೋಗಿಸುವ ಕಚ್ಚಾವಸ್ತುವಿನ ವೈವಿಧ್ಯವನ್ನು ಅವಲಂಬಿಸಿವೆ. ಚಿಂದಿಗಳನ್ನು ಎಳೆಗಳಾಗಿ ಬಿಡಿಸುವಾಗ ಅತ್ಯಂತ ಬಿರುಸಾದ ಕ್ರಮಗಳಿಗೆ ಒಳಗಾಗಿಸುವುದರಿಂದ ಅವು ಬಲು ಚಿಕ್ಕ ಎಳೆಗಳಾಗಿ ಪರಿಣಮಿಸುತ್ತವೆ. ಆದ್ದರಿಂದ ಸಾಮಾನ್ಯ ವಾಗಿ ಅವನ್ನು ನೂಲುವಾಗ ಸಹಾಯಕವಾಗಲು ಹಾಗೂ ಮತ್ತಷ್ಟು ಬರಲು ಹತ್ತಿಯೊಡನೆ ಬೆರೆಸುತ್ತಾರೆ. 	(ವಿ.ಎಸ್.ವಿ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ